BHAGAVADGITE TILIGANNADA
ತಿಳಿಗನ್ನಡದಲ್ಲಿ ಭಗವದ್ಗೀತೆ
ಅನುವಾದ ಮತ್ತು ವ್ಯಾಖ್ಯಾನ
ಮಂಡಗದ್ದೆ ಶ್ರೀನಿವಾಸಯ್ಯ
ಶ್ಲೋಕ ೨೨ (ಕೆಲವು ವಿವರಣೆಗಳು)
ಪೂರ್ವ ವಸ್ತ್ರಗಳನ್ನು ತ್ಯಜಿಸಿ ಮನುಜನು ತೊಡಲಿಹನು ನವ ವಸ್ತ್ರಗಳನ್ನು, ಅಂತೆಯೆ ಜೀವಾತ್ಮನ್ ತನ್ನ ಪೂರ್ವ ಶರೀರವನ್ನು ತ್ಯಜಿಸಿ ಕಳಚಿ ಪಡೆವನು ನವ ಶರೀರವನ್ನು.
ಆತ್ಮನ ಸ್ವರೂಪ ಮತ್ತು ನಿಗೂಢತೆಯ ಬಗ್ಗೆ ಹಿರಿಯರು ಮತ್ತು ಓದುಗರು ತಮ್ಮ ಸಂದೇಹಗಳನ್ನು ಮುಂದಿಟ್ಟಿದ್ದರು. ಮಾತ್ರವಲ್ಲ, ಹಲವು ಸಲಹೆಗಳು ಸಹ ಬಂದಿವೆ. ಅವುಗಳ ಬಗ್ಗೆ ಕೆಳಗಿನ ನಾಲ್ಕು ಮಾತುಗಳು ತಮ್ಮ ಮುಂದೆ. ಶ್ಲೋಕ ೨೨ ಕ್ಕೂ ಇದು ಅನ್ವಯಿಸುವುದು.
ಭಗವದ್ಗೀತೆಯ ಎರಡನೇ ಅಧ್ಯಾಯ, ಸಾಂಖ್ಯ ಯೋಗದಲ್ಲಿ ಬರುವ ಶ್ಲೋಕಗಳು ‘ಆತ್ಮ’ ನ ಸುತ್ತಲೇ ಓಡಾಡುವುದನ್ನು ನೋಡಿದ್ದೇವೆ. ಗೀತೆಯ ಈ ಶ್ಲೋಕಗಳಲ್ಲಿ ಕೆಲವು ಕಡೆ ವೈಜ್ಞಾನಿಕ ಹಿನ್ನೆಲೆಯನ್ನು ಸ್ಥೂಲವಾಗಿ ಚರ್ಚಿಸಿರುವುದೂ ಇದೆ. ಇದು ಹೀಗೇ ಎಂದು ಹೇಳಲು ಬರುವುದಿಲ್ಲ. ಜಗತ್ತಿನಾದ್ಯಂತ ವಿದ್ವಾಂಸರು ಅವರವರ ಸಿದ್ಧಾಂತ ಮತ್ತು ಭಾವಕ್ಕೆ ತಕ್ಕ ಹಾಗೆ ಗೀತೆಯ ಆಶಯಗಳಿಗೆ ತಾತ್ಪರ್ಯವನ್ನು ಕೊಟ್ಟಿದ್ದಾರೆ. ಅದೂ ಕೂಡಾ ಸರಿಯೇ. ಈ ಮಧ್ಯೆ ಹಿರೀಕರು ಮತ್ತು ಕೆಲವರು ಕೆಲವು ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ ಮತ್ತು ಮಾರ್ಗದರ್ಶನ ಮಾಡಿದ್ದಾರೆ.
ಆತ್ಮವು ಒಂದು ಶರೀರವನ್ನು ತ್ಯಜಿಸಿ ಮತ್ತೊಂದು ಶರೀರವನ್ನು ಸೇರುವುದು ಎಂದರೆ ಪುನರ್ಜನ್ಮದ ಕಲ್ಪನೆಯೇ ಆಗಿದೆ. ಆಗ ಶರೀರದ ಮೂಲಭೂತ ಅಂಶ, ಆತ್ಮ ಎನ್ನುವ ಜೀವಕೋಶ (ಸೆಲ್) ನ್ಯೂಕ್ಲಿಯಸ್ ಮತ್ತು ಡಿ.ಎನ್.ಎ ಮುಂತಾದ ವಂಶವಾಹಿ ತಳಿಗಳನ್ನು ಹೊತ್ತುಕೊಂಡು ಮುಂದಿನ ಪೀಳಿಗೆಗೆ ಹರಿಯುತ್ತದೆ ಎಂದು ಸ್ಥೂಲವಾಗಿ ತಿಳಿದಿದ್ದೇವೆ. ಹೀಗೆ ಹರಿದಾಗ ಆ ಹೊಸ ಪೀಳಿಗೆಯ ವ್ಯಕ್ತಿಗೆ ತನ್ನ ಹಿಂದಿನ ಜನ್ಮದ ಯಾವ ವಿಚಾರವೂ ಗೊತ್ತಾಗುವುದಿಲ್ಲ. ಅಲ್ಲಿ ಇಲ್ಲಿ, ಮಾಧ್ಯಮದ ಮೂಲಕ ಹಿಂದಿನ ಜನ್ಮದ ವೃತ್ತಾಂತವನ್ನು ಅವರು ಹೇಳಿದರು, ಇವರು ಕೇಳಿದರು ಎಂಬ ಕಥೆಯನ್ನು ಕೇಳಿದ್ದೇವೆ. ಆದರೆ, ಒಕ್ಕಲು, ಕುಲ, ತಳಿ, ಪಂಚಾಚಾರ್ಯ, ಗೋತ್ರ, ಪ್ರವರ ಮುಂತಾದುವುಗಳಿಂದ ಪೂರ್ವಜರ ಒಂದೇ ಕುಟುಂಬಕ್ಕೆ ಸೇರಿದವರು ಎಂಬ ರೂಢಮೂಲ ವಿಚಾರಗಳು, ತಾನು ಇಂಥ ವಂಶವಾಹಿ ತಳಿಯಿಂದ ಬಂದವನು ಎಂದು ತಿಳಿದು ಮದುವೆ ಮಾಡುವಾಗ ಎಚ್ಚರ ವಹಿಸುವ ಸಂಪ್ರದಾಯ ಈಗಲೂ ಆಚರಣೆಯಲ್ಲಿ ಇದೆ. ಕಾಲಮಾನಕ್ಕೆ ತಕ್ಕ ಹಾಗೆ ಬದಲಾವಣೆ ಹೊಂದಿ, ಸಂಪ್ರದಾಯದ ಸೀಮೆಯನ್ನು ದಾಟಿರುವವರೂ ಬಹಳ ಸಂಖ್ಯೆಯಲ್ಲಿ ಇದ್ದಾರೆ. ಕೆಲವು ಸಂದರ್ಭಗಳಲ್ಲಿ ಯಾರ ಮಗ ಎನ್ನುವ ಸಮಸ್ಯೆ ಬಂದಾಗ ಹತ್ತಿರದ ಬಂಧು ಬಳಗದವರ ಡಿ.ಎನ್.ಎ ಪರೀಕ್ಷೆಯಿಂದ ತಿಳಿಯುವ ಪ್ರಯತ್ನ ನಮಗೆಲ್ಲಾ ಪರಿಚಿತ. ಏನೇ ಆದರೂ ತಾನು ಹಿಂದಿನ ಜನ್ಮದಲ್ಲಿ ಹೀಗೆ ಇದ್ದೆ ಎಂದು ತಿಳಿಯಲು ಆಗದು. ಆ ಜೀವಾತ್ಮ ತುಂಬಾ ಕಷ್ಟದಲ್ಲಿತ್ತು, ಈಗ ಈ ಜೀವಾತ್ಮ ಆನಂದದಿಂದ ಇದೆ ಎಂದು ಹೇಳಲು ಆಗುವುದಿಲ್ಲ. ಹಿಂದು, ಜೈನ ಮುಂತಾದ ಸಮುದಾಯದಲ್ಲಿ ಪುನರ್ಜನ್ಮ ಕೇವಲ ಮನುಷ್ಯ ಜನ್ಮ ಮಾತ್ರ ಆಗಿರದೆ ಅದು, ಹುಲಿ, ಇಲಿ, ಜಿಂಕೆ, ನಾಯಿ, ಮೊಲ..ಏನಾದರೂ ಆಗಬಹುದು. ಒಟ್ಟಿನಲ್ಲಿ ತಿರ್ಯಗ್ ಜಂತು (ಪ್ರಾಣಿಗಳಿಗೆ ಸಂಬಂಧಿಸಿದ) ಎಂದು ಪುರಾಣಗಳಲ್ಲಿ ಹೇಳಿದೆ.
ಶ್ಲೋಕ ೨೨ ರಲ್ಲಿ ಹಳೇ ಬಟ್ಟೆ ಬದಲಾಯಿಸಿ ಹೊಸ ಬಟ್ಟೆ ತೊಡುವುದನ್ನು ಒಂದು ಉಪಮೆಯಾಗಿ ಬಳಸಿರಬಹುದು. ಇದು ಉತ್ರೇಕ್ಷಾಲಂಕಾರ ಇದ್ದ ಹಾಗೆ. ಅತಿಶಯೋಕ್ತಿಯ ಕಲ್ಪನೆಯನ್ನು ಮಾಡಿ ಮಹೋನ್ನತ ಆತ್ಮನನ್ನು ಹಳೇ ಬಟ್ಟೆಯಿಂದ ಹೊಸ ಬಟ್ಟೆಗೆ ಬದಲಿಸಿದ ಹಾಗೆ ಆತ್ಮನ ನಿತ್ಯತೆ ಮತ್ತು ಬದಲಾವಣೆಗೆ ಒಂದು ಚೌಕಟ್ಟನ್ನು ಕೊಟ್ಟಿದ್ದಾರೆ ಎಂದು ಭಾವಿಸಬಹುದು. ಬಟ್ಟೆ ಬದಲಾಯಿಸುವ ಉದಾಹರಣೆ ನಮ್ಮ ಜೀವಿತಾವಧಿಯಲ್ಲೇ ನೋಡಬಹುದು, ಬೇಕೆನಿಸಿದಾಗ ನಮ್ಮ ಆಯ್ಕೆಯಂತೆ ಹೊಸದನ್ನು ಪಡೆದು ಹಬ್ಬ ಹರಿದಿನ, ಮುಂದಿನ ಕೆಲವು ದಿನಗಳ ಆನಂದ ಅನುಭವಿಸಬಹುದು. ಆತ್ಮನ ವಿಷಯದಲ್ಲಿ ನಮಗೇನೂ ಗೊತ್ತಾಗುವುದಿಲ್ಲ. ಜೀರ್ಣೀಸಿದ ಶರೀರವನ್ನು ತ್ಯಜಿಸುವ ಆಯ್ಕೆ ನಮ್ಮದಲ್ಲ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎನ್ನುವುದು ಲೋಕಾರೂಢಿ. ತ್ಯಾಗಮಯ ಜೀವವನ್ನು ಪಾಲಿಸುವವನು ಆತ್ಮದ ಪರಿಕಲ್ಪನೆಯಲ್ಲಿ ಆನಂದಿಸುವನು ಎಂದು ಗೀತೆಯಲ್ಲಿ ಹೇಳಿದೆ.
‘ಅನಾಯಾಸೇನ ಮರಣಂ’ ಎಂಬ ಮಾತನ್ನು ಹಿರಿಯರು ಹೇಳಿದ್ದಾರೆ. ಅದು ಸತ್ಯ. ಯಾರೂ ಸಾವನ್ನು ಬಯಸಲು ಹೋಗುವುದಿಲ್ಲ. ಕಾರಣ ತಿಳಿದೇ ಇದೆ, ಜೀವನೋತ್ಸಾಹ! ಆದರೆ ಸಾವು ಬಂದರೆ ಅದು ಅನಾಯಾಸವಾಗಿರಬೇಕೆಂದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ. ಮರೆಗುಳಿತನವೂ ಸೇರಿದಂತೆ ವೃದ್ಧಾಪ್ಯದ ತೀವ್ರ ಸಮಸ್ಯೆಗಳು, ದೀರ್ಘಕಾಲೀನ ಕಾಯಿಲೆಯಿಂದ ನರಳಿ ನರಳಿ ಹೈರಾಣಾಗುವುದು, ಹಾಸಿಗೆ ಹಿಡಿದು ದುಃಖ ಪಡುವುದು, ನರಳುತ್ತಲೇ ಇನ್ನೊಬ್ಬರನ್ನು ಅವಲಂಬಿಸಿಕೊಳ್ಳಲು ಶೇಷಾವಧಿಯನ್ನು ಸವೆಸುವುದು ಹೀಗೆ ಬೇರೆ ಬೇರೆ ಕಾರಣಗಳಿಗಾಗಿ ಚಿಂತನ ಮಾಡುವ ಮನುಷ್ಯ, ತಾನು ಚೆನ್ನಾಗಿರುವಾಗಲೇ ಯಾರಿಗೂ ಭಾರವಾಗದ ಹಾಗೆ ನನ್ನ ಜೀವ ಅಂತ್ಯವಾಗಬೇಕು, ನನಗೆ ಸುಖದ ಸಾವನ್ನು ಕೊಡು’ ಎಂದು ಬಯಸುತ್ತಾನೆ. ಇದು ಸಹಜವಾಗಿದೆ ಎಂದು ಅನಿಸುವುದು.
ಈ ಮೇಲ್ಕಂಡ ಅನಿಸಿಕೆಗಳಲ್ಲಿ ತಪ್ಪು-ಒಪ್ಪುಗಳು ಇರಬಹುದು. ಇದಮಿತ್ಥಂ ಎಂದು ಹೇಳುವುದು ಕಷ್ಟ. ಈ ಬಗ್ಗೆ ಆಸಕ್ತರು ವೇದಿಕೆಯಲ್ಲಿ ಚರ್ಚೆ ಮಾಡಬಹುದು. ಸಲಹೆಗಳನ್ನು ಕೊಡಬಹುದು.
mandagadde srinivasaiah
ಪ್ರತ್ಯುತ್ತರಅಳಿಸಿ